ಚಾಮರಾಜನಗರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚಿರತೆ ಮತ್ತು ಹುಲಿ ಹಾವಳಿ ಹೆಚ್ಚಾಗಿದ್ದು, ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡು ಪ್ರಾಣಿಗಳನ್ನು ಸೆರೆ ಹಿಡಿಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಸುಲ್ತಾನ್ ಷರೀಫ್ ರಸ್ತೆಯಲ್ಲಿರುವ ಬಿ.ಆರ್.ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದ ಜನರು ಹುಲಿ, ಚಿರತೆ ಹಾಗೂ ಇನ್ನಿತರೆ ಕಾಡು ಪ್ರಾಣಿಗಳ ಹಾವಳಿಯಿಂದ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಹರವೆ ಹೋಬಳಿ ವ್ಯಾಪ್ತಿಯ ಮಲೆಯೂರು ಗ್ರಾಮದಲ್ಲಿ ಕಳೆದ ಒಂದು ವಾರಗಳಿಂದ ಹುಲಿ ಕಾಣಿಸಿಕೊಂಡು ರೈತರು ಆತಂಕದಲ್ಲೇ ಜೀವನ ಸಾಗಿಸುವಂತಾಗಿದೆ. ಈ ಕುರಿತು ಹಲವಾರು ಬಾರಿ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಇದ್ದ ಅರಣ್ಯ ಸಚಿವರು ಬೇಕಾಬಿಟ್ಟಿ ತೀರ್ಮಾನಗಳನ್ನು ತೆಗೆದುಕೊಂಡ ಪರಿಣಾಮ, ರೈತರು ಅನೇಕ ಸಮಸ್ಯೆಗಳನ್ನು ಅನುಭವಿಸುವಂತಾಯಿತು. ಹರಿವೆ, ಮಲೆಯೂರು, ಅಮಚವಾಡಿ, ಹೊನ್ನಹಳ್ಳಿ ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಹಸು-ಕರುಗಳು, ಮೇಕೆಗಳು ಹಾಗೂ ರೈತರ ಮೇಲೂ ಹುಲಿ ದಾಳಿ ಮಾಡುತ್ತಿದೆ. ಆದರೆ ಅರಣ್ಯ ಇಲಾಖೆ ರೀತಿಯಲ್ಲಿ ಚಿರತೆ ಮತ್ತು ಹುಲಿಯನ್ನು ವೈಜ್ಞಾನಿಕ ರೀತಿಯಲ್ಲಿ ಸೆರೆ ಹಿಡಿಯುವ ಕೆಲಸವನ್ನು ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.
ಈಗಾಗಲೇ ಕಾಡು ಪ್ರಾಣಿಗಳಿಗೆ 4-5 ಜೀವಗಳು ಬಲಿಯಾಗಿದೆ. ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಮಾಡಲು ಸಮಸ್ಯೆಯಾಗುತ್ತಿದೆ. ಹುಲಿ ದಾಳಿಯಿಂದ ಜನರು ಭಯಭೀತರಾಗಿದ್ದು, ಜಮೀನುಗಳಿಗೆ ಕೂಲಿ ಆಳುಗಳು ಕೂಡ ಸಿಗುತ್ತಿಲ್ಲ. ಕೂಡಲೇ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ಕೂಂಬಿಂಗ್ ಮಾಡುವ ಮೂಲಕ ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು, ಜಿಲ್ಲಾ ಕಾರ್ಯದರ್ಶಿ ಮಲೆಯೂರು ಮಹೇಂದ್ರ, ತಾಲೂಕು ಅಧ್ಯಕ್ಷ ಅಂಗಡಿ ಸತೀಶ್, ಶ್ಯಾನಡ್ರಳ್ಳಿ ಬಸವರಾಜು, ನಾಗರಾಜಪ್ಪ, ಹೊನ್ನೇಗೌಡನಳ್ಳಿ ಮಹೇಶ್, ಕಿಳಲೀಪುರ ಶ್ರೀಕಂಠ, ಮಹದೇವಪ್ಪ, ನರಸಮಂಗಲ ನಾಗಮಲ್ಲಪ್ಪ, ಮುಕ್ಕಡಹಳ್ಳಿ ರಾಜು, ಸಿದ್ದರಾಜು, ಅರಳೀಕಟ್ಟೆ ಪ್ರಭುಸ್ವಾಮಿ, ಚನ್ನಪ್ಪನಪುರ ಮಲ್ಲೇಶ್, ಪ್ರಸಾದ್ ಹಾಗೂ ಇತರರು ಹಾಜರಿದ್ದರು.