“ಹುಲಿಯನ್ನು ರಕ್ಷಿಸಿದರೆ ಇಡೀ ಅರಣ್ಯ ಪರಿಸರ ವ್ಯವಸ್ಥೆಯನ್ನೇ ರಕ್ಷಿಸಿದಂತೆ” ಒಂದು ಕಾಡಿನಲ್ಲಿ ಹುಲಿ ಸಂರಕ್ಷಿತವಾಗಿದೆಯೆಂದರೆ ಆ ಕಾಡಿನ ಸಸ್ಯವರ್ಗ,ಜಿಂಕೆ ಕಡವೆಗಳಂತಹ ಸಸ್ಯಹಾರಿ ಪ್ರಾಣಿಗಳು ಹಾಗೂ ನದಿ-ತೊರೆಗಳು ಆರೋಗ್ಯವಾಗಿವೆಯೆಂದರ್ಥ. ಈ ಕಾರಣಕ್ಕಾಗಿಯೇ ಹುಲಿಯನ್ನು ʼಅಂಬ್ರೆಲಾ ಸ್ಪೀಷೀಸ್ʼ (Umbrella Speces) ಎಂದು ಉಲ್ಲೇಖಿಸುತ್ತಾರೆ. ಹುಲಿಯು ಜಾಗತಿಕ ಮಟ್ಟದಲ್ಲಿ ಅತ್ಯಂತ ಗೌರವ ಆಕರ್ಷಣೆ, ಮತ್ತ ಆತಂಕ ಈ ಮೂರು ಭಾವನೆಗಳನ್ನು ಒಟ್ಟಿಗೆ ಮೂಡಿಸುವ ಅಪರೂಪದ ಜೀವಿಯಾಗಿದೆ ಎಂದು ವಿಶ್ವಸಂಸ್ಥೆಯಿಂದಿಡಿದು ಅಂತರಾಷ್ಟ್ರೀಯ ವನ್ಯಜೀವಿಗಳ ಸಂಸ್ಥೆಗಳವರೆಗೆ ವಿಭಿನ್ನ ದೃಷ್ಟಿಕೋನಗಳಿಂದ ಅಭಿಪ್ರಾಯಿಸುತ್ತಾರೆ.
ವಿಶ್ವದಲ್ಲಿಯೇ ಅತೀ ಹೆಚ್ಚು ಮಾವನ ಸಾಂದ್ರತೆ ಹೊಂದಿರುವ ದೇಶಗಳಲ್ಲಿ ಒಂದಾದ ಭಾರತದಲ್ಲಿ ಶೇಕಡಾ 70 ಕ್ಕೂ ಅಧಿಕ ಹುಲಿಗಳು ಸುರಕ್ಷಿತವಾಗಿರುವುದು ಜಾಗತಿಕ ಮಟ್ಟದಲ್ಲಿ ಅಚ್ಚರಿ ಮೂಡಿಸಿದೆ. 2010 ರಲ್ಲಿ ರಷ್ಯಾದ ಸೆಂಟ್ ಪೀಟರ್ಸ್ ಬರ್ಗನಲ್ಲಿ ನಡದ ಜಾಗತಿಕ ಹುಲಿ ಶೃಂಗ ಸಭೆಯಲ್ಲಿ (Saint Petersburg Tiger Summit) ನಲ್ಲಿ ಹುಲಿಗಳ ಸಂರಕ್ಷಣೆ ಮತ್ತು ಜಾಗೃತಿಗಾಗಿ ಪ್ರತಿ ವರ್ಷ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸುವಂತೆ ನಿರ್ಧರಿಸಲಾಗಿದೆ.
ಹುಲಿಗಿಂತಲೂ ಮೊದಲು ಸಿಂಹವು ಭಾರತದ ರಾಷ್ಟ್ರೀಯ ಪ್ರಾಣಿಯಾಗಿತ್ತು, ಸಿಂಹವು ಕೇವಲ ಗುಜರಾತಿನ ಗಿರ್ ಅರಣ್ಯಕ್ಕೆ ಸೀಮಿತವಾಗಿದ್ದವು, ಆದರೆ ಹುಲಿಗಳು ಭಾರತದ 16 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದ್ದರಿಂದ, ಹುಲಿಗೆ ರಾಷ್ಟ್ರೀಯ ಪ್ರಾಣಿ ದರ್ಜೆ ನೀಡುವುದರಿಂದ ಜಾಗತಿಕ ಗಮನ ಸೆಳೆಯಬಹುದು ಮತ್ತು ಅದರ ಸಂರಕ್ಷಣೆಗೆ ಕಟ್ಟುನಿಟ್ಟಾದ ಕಾಯಿದೆ ತರುವ ಸದುದ್ದೇಶದಿಂದ ದೇಶದಲ್ಲಿಯೇ ಮೊದಲ ಬಾರಿಗೆ ಬಂಡೀಪುರದಲ್ಲಿ ʼಪ್ರಾಜೆಕ್ಟ್ ಟೈಗರ್ʼ ನ್ನು 1973 ರಂದು ಪ್ರಾರಂಭಿಸಿದರು ಮತ್ತು ಹುಲಿಯು ಅಪಾರ ಬಲ, ಗಾಂಭೀರ್ಯ ಚುರುಕುತನ ಮತ್ತು ಶೌರ್ಯಕ್ಕೆ ಹೆಸರುವಾಸಿಯಾಗಿದ್ದು ಭಾರತೀಯ ಪುರಾಣಗಳಲ್ಲಿ ದೇವತೆಗಳ ವಾಹನವಾಗಿ ಹುಲಿಗೆ ಪೂಜನೀಯವಾದ ಮತ್ತು ವೈವಿಧ್ಯಮಯ ಶಕ್ತಿಗೆ ಹುಲಿ ಸರಿಯಾದ ಸಂಕೇತವೆಂದು ಹುಲಿಯನ್ನು 1973 ರ ಏಪ್ರಿಲ್ 1 ರಂದು ಅಧಿಕೃತವಾಗಿ ಭಾರತದ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿದರು. 20ನೇ ಶತಮಾನದ ಆರಂಭದಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆ ಸುಮಾರು 40000 ಕ್ಕೂ ಅಧಿಕವಿತ್ತು ಆದರೆ ರಾಜರ ಶಿಕಾರಿ ಮತ್ತು ಬ್ರಿಟಿಷರ ಬೇಟೆ, ಕಾಡಿನ ನಾಶದಿಂದ 1970 ರ ದಶಕದ ವೇಳೆಗೆ 1827 ಕ್ಕೆ ಕುಸಿತು ಎಂಬುದನ್ನು ನಾವು ಗಮನಿಸಬೇಕಾದ ಸಂಗತಿ. ಪ್ರಸ್ತುತ ಭಾರತದಲ್ಲಿ ವಿಶ್ವದ ಒಟ್ಟು ಹುಲಿಗಳಲ್ಲಿ ಶೇಕಡಾ 75 ಕ್ಕೂ ಅಧಿಕ ಹುಲಿಗಳಿಗೆ ಭಾರತವೊಂದೆ ಆಸರೆಯಾಗಿದ್ದು ಕರ್ನಾಟಕವು 2 ನೇ ಸ್ಥಾನದಲ್ಲಿರುವುದು ಗಮನಾರ್ಹವಾದ ವಿಷಯ.
ಚಾಮರಾಜನಗರದ ವ್ಯಾಘ್ರಸಾಮ್ರಾಜ್ಯದ ಪುರಾತನ ಸಂಬಂಧ: ಬಂಡೀಪುರ ಹಿಮವದ್ ಗೋಪಾಸ್ವಾಮಿ ಬೆಟ್ಟ ಹಾಗೂ ಬಿಳಿಗಿರಿರಂಗನಬೆಟ್ಟ(BRT) ಕಾಡುಗಳನ್ನು ಮೈಸೂರು ಮಹರಾಜರು ತಮ್ಮ ʼವಿಶೇಷ ಶಿಕಾರಿ ಅರಣ್ಯ’ (Royal Hunting Reserver) ಅಧಿಕೃತ ಶಿಕಾರಿಯನ್ನಾಗಿಸಿಕೊಂಡಿದ್ದರು ಖೇಡಾ ಮತ್ತು ಬೇಟೆಗಾಗಿ ಬ್ರಿಟಿಷ್ ವೈಸರಾಯ್ಗಳು, ಗವರ್ನರ್ ಗಳು ಹಾಗೂ ವಿದೇಶಿ ಗಣ್ಯರು ಮೈಸೂರಿಗೆ ಬೇಟಿ ನೀಡಿದಾಗ ಹುಲಿ ಶಿಕಾರಿ ಏರ್ಪಡಿಸುವುದು ಮೈಸೂರು ಸಂಸ್ಥಾನದ ಗೌರವ ರಾಜ ಗಾಂಭೀರ್ಯದ ಸಂಕೇತವಾಗಿತ್ತು ಮಹರಾಜ ಜಯಚಾಮರಾಜೇಂದ್ರ ಒಡೆಯರ ಮತ್ತು ನಾಲ್ವಡಿ ಕೃಷ್ಣರಾಜರು ಶಿಕಾರಿಯಲ್ಲಿ ಆಸಕ್ತಿ ಹೊಂದಿದ್ದರು. 1931 ರ ಹೊತ್ತಿಗಾಗಲೇ ಹುಲಿಗಳ ಸಂರಕ್ಷಿಸುವ ದೃಷ್ಟಿಯಿಂದ ವೇಣುಗೋಪಾಲ ವನ್ಯ ಜೀವಿ ಅಭಯಾರಣ್ಯವೆಂದು ಇಂದಿನ ಬಂಡೀಪುರವನ್ನು ಕಾಯ್ದಿರಿಸಿದರು. 1973 ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ʼಪ್ರಾಜೆಕ್ಟ್ ಟೈಗರ್ʼ(Project Tiger) ಜಾರಿಗೆ ತಂದು ಬಂಡೀಪುರ ಹುಲಿ ಸಂರಕ್ಷಣ ತಾಣವಾಯಿತು.
ಆರ್.ಸಿ ಮೋರಿಸ್ ಸಾಹೇಬ ಮತ್ತು ಬೇಡಗುಳಿ ಹುಲಿ (1920-1940): ರಾಂಡಲ್ಫ್ ಕ್ಯಾಮ್ರೋಸ್ ಮೋರಿಸ್ (Randolph Comroux Morris) 19 ನೇ ಶತಮಾನದ ಕೊನೆಯಲ್ಲಿ 20 ನೇ ಶತಮಾನದ ಆರಂಭದಲ್ಲಿ ಬ್ರಿಟಿಷರು ಬಿಳಿಗಿರಿರಂಗನಬೆಟ್ಟ(BRT) ಬೆಟ್ಟದ ಬೇಡಗುಳಿಯಲ್ಲಿ ಕಾಫಿ ಮತ್ತು ಚಹಾ ತೋಟಗಳನ್ನು ಸ್ಥಾಪಿಸಿದರು. ಆರ್.ಸಿ ಮೋರಿಸ್ ಒಬ್ಬ ಕಾಫಿ ಬೆಳೆಗಾರ, ನುರಿತ ಶಿಕಾರಿಯಾಗಿ ಹಾಗೂ ನಿಸರ್ಗಶಾಸ್ತ್ರಜ್ಞನಾಗಿ 1920 ರಿಂದ 1950 ರ ವರೆಗೆ ಸುಮಾರು 35 ವರ್ಷಗಳ ಕಾಲ ಬೇಡಗುಳಿ ಎಸ್ಟೇಟಿನಲ್ಲಿಯೇ ಇದ್ದು ನೂರಾರು ನರಭಕ್ಷಕ ಹುಲಿಗಳು, ಚಿರತೆಗಳು ಮತ್ತು ಆನೆಗಳನ್ನು ಬೇಟೆಯಾಡಿದ್ದನೆಂದು ಅದರಲ್ಲಿ ಮುಖ್ಯವಾಗಿ ಬೇಡಗುಳಿ ಹುಲಿ ಬೇಟೆಯ ಅಖಾಡವಾಗಿತ್ತೆಂದು BRT ಬೇಡಗುಳಿಯ ಬಂಗಲೆಗಳು ಅಂದಿನ ಶಿಖಾರಿಯ ಇತಿಹಾಸವನ್ನು ಇಂದಗೂ ಸಾರಿ ಹೇಳುತ್ತವೆ. ನುರಿತ ಶಿಕಾರಿಯಾಗಿದ್ದ ಆರ್.ಸಿ ಮೋರಿಸ್ ನು 1930-40 ವೇಳೆಗೆ ಶಿಕಾರಿಯಿಂದ ಹುಲಿಗಳ ಸಂರಕ್ಷಣೆಯೆಡೆಗೆ ಗಮನಹರಿಸಿ ವನ್ಯಜೀವಿಗಳ ನಡವಳಿಕೆಯನ್ನು ಅಧ್ಯನ ನಡೆಸಿ ಅಂದಿನ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (Journal Of The Bombay Natural History Society) JBNHS ಗೆ ಟಿಪ್ಪಣಿಗಳನ್ನು ಬರೆದಿರುದನ್ನು ಕಾಣಬಹುದು. ಆರ್.ಸಿ ಮೋರಿಸ್ ನ ಹೊರತಾಗಿಯೂ 19 ನೇ ಶತಮಾನದ ಉತ್ತರಾರ್ಧದಲ್ಲಿ ರಾಬರ್ಟ್ ಅರ್ಥರ್ ಡಿಕನ್ಸನ್ (Robert Arthur Dickenson) ಜಿ ಎಲ್ ಮಿಚೆಲ್ ಬ್ರಿಟಿಷ್ ಅಧಿಕಾರಿಗಳು ನರಭಕ್ಷಕ ಹುಲಿಗಳನ್ನು ಶಿಕಾರಿ ಮಾಡಿದ್ದರೆಂದು (The Tigers Of Mysur) & (Feleis Tigers; The Tigers In India ) ಪುಸ್ತಕಗಳಲ್ಲಿ ಕಾಣಬಹುದು.
ಮಹಾವ್ಯಾಘ್ರನ ವೈಭವ…. 1-ಮನುಷ್ಯನ ಬೆರಳಚ್ಚಿನಂತಹ ಪಟ್ಟೆಗಳು- ಪ್ರತಿಯೊಂದು ಹುಲಿಗಳ ಮೇಲಿರುವ ಕಪ್ಪು ಪಟ್ಟೆಗಳ ವಿನ್ಯಾಸವು ಒಂದಕ್ಕಿಂತ ಇನ್ನೊಂದು ಸಂಪೂರ್ಣ ವಿಭಿನ್ನವಾಗಿದ್ದು ಪಟ್ಟೆಗಳ ವಿನ್ಯಾಸ ಕೇವಲ ತುಪ್ಪಳದಲ್ಲಷ್ಟೆ ಅಲ್ಲದೇ ಚರ್ಮದ ಮೇಲೆ ವಿನ್ಯಾಸ ಮೂಡಿರುತ್ತದೆ. ಈ ಪಟ್ಟಿಗಳ ವಿನ್ಯಾಸವನ್ನು ಆಧರಿಸಿಯೇ ಅರಣ್ಯ ಇಲಾಖೆಯ ಕ್ಯಾಮೆರ ಟ್ರ್ಯಾಪ್ಗಳ ಮೂಲಕ ಹುಲಿಯನ್ನು ಪ್ರತ್ಯೇಕವಾಗಿ ಗುರುತಿಸುತ್ತಾರೆ.
2-ಕಾಡಿನ ʼಅಂಬ್ರೆಲಾ ಸ್ಪೀಷೀಸ್-ಹುಲಿ ಜೈವಿಕ ಸರಪಳಿಯ ರಕ್ಷಕ ಪ್ರಕೃತಿಯಲ್ಲಿ ಸಮತೋಲನವನ್ನು ಕಾಪಾಡುವ ಕಾಡಿನ ಆರೋಗ್ಯವನ್ನು ನಿರ್ಧರಿಸುವ ಪ್ರಾಣಿ.
3-ಅತ್ಯುತ್ತಮ ಈಜುಗಾರ- ಸಿಂಹ ಮತ್ತು ಬೆಕ್ಕಿನ ಜಾತಿಗೆ ಸೇರಿದ ಹೆಚ್ಚಿನ ಪ್ರಾಣಿಗಳು ನೀರನ್ನು ಅಷ್ಟಾಗಿ ಇಷ್ಟಪಡುವುದಿಲ್ಲ ಆದರೆ ಹುಲಿಗೆ ನೀರೆಂದರೆ ಅತ್ಯಂತ ಪ್ರೀತಿ ಬಿಸಿಲಿನಿಂದ ತಂಪಾಗಲು ಗಂಟೆಗಟ್ಟಲೇ ನೀರಿನಲ್ಲಿರುತ್ತದೆ. ಸರಾಗವಾಗಿ ನದಿಗಳನ್ನು ದಾಟಲು ಈಜುತ್ತದೆ.
4-ಏಕಾಂಗಿ ಮತ್ತು ಪ್ರಾದೇಶಿಕ ಸ್ವಭಾವ- ಸಿಂಹಗಳಂತೆ ಹುಲಿ ಗುಂಪಿನಲ್ಲಿರುವುದಿಲ್ಲ, ಇವು ಸಂಪೂರ್ಣ ಏಕಾಂಗಿ ಜೀವಿಗಳು. ಪ್ರತಿಯೊಂದು ಹುಲಿ ತನಗಾಗಿ 40 ರಿಂದ 100 ಚದುರ ಕಿ.ಮೀ ವಿಸ್ತೀರ್ಣ ಸ್ವಂತ ಗಡಿ (ಟೆರಿಟರಿ) ಯನ್ನು ಕಂಡುಕೊಳ್ಳುತ್ತದೆ. ಮೂತ್ರದ ವಾಸನೆ ಮತ್ತು ಮರದ ತೊಗಟೆಗಳ ಮೇಲೆ ಉಗುರಿನಿಂದ ಗೀರಿ ತಮ್ಮ ಗಡಿಯನ್ನು ಗುರುತಿಸಿಕೊಳ್ಳುತ್ತವೆ.
5-ಸ್ಪಷ್ಟ ರಾತ್ರಿ ದೃಷ್ಟಿ ಮತ್ತು ಶಿಕಾರಿ ಶೂರ- ಮನುಷ್ಯನಿಗಿಂತಲೂ 6 ಪಟ್ಟು ಕತ್ತಲೆಯಲ್ಲಿ ಸ್ಪಷ್ಟವಾಗಿ ಹುಲಿ ನೋಡಬಲ್ಲದು ಉಗುರುಗಳನ್ನು ಹಿಂತೆಗೆದುಕೊಳ್ಳುವ ಸಾಮರ್ಥ್ಯವಿರುವುದರಿಂದ ಬೇಟೆಗೆ ತೀರಾ ಹುಲಿಯ ಉಪಸ್ಥಿತಿಯಅಗುವವರೆಗೂ ತಿಳಿಯುವುದಿಲ್ಲ.
6-ಪವರ್ ಫುಲ್ ರೋರ್- ಹುಲಿಯು ಘರ್ಜಿಸಿದರೆ ಸುಮಾರು 3 ಕಿ.ಮೀ ದಟ್ಟ ಕಾಡಿನಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ.
ದಿನಾಚರಣೆಯ ಕನ್ನಡಿ; ಚಾಮರಾಜನಗರದ ಕಳವಳ: ಸಾಂಪ್ರಾದಾಯಿಕ ಶಿಕಾರಿಗಳಿಗಿಂತ ಸ್ಥಳೀಯರ ಆಕ್ರೋಶದ ಸೇಡಿನ ಕೊಲೆಗಳು ಜಾಗತಿಕವಾಗಿ ಹುಲಿಗಳ ಅಸ್ತಿತ್ವಕ್ಕೆ ಇರುವ ದೊಡ್ಡ ಬೆದರಿಕೆಯಾಗಿದೆ ವಿಶ್ವಸಂಶ್ಥೆಯ ಪರಿಸರ ವಿಭಾಗದ ಪಾಲುದಾರ ಸಂಸ್ಥೆಗಳು ಜಾಗತಿಕ ಹುಲಿ ಪೋರಂ (Global Tiger Fourm) IUCN, WWF ಜಾಗತಿಕ ಮಟ್ಟದ ಆತಂಕವನ್ನು ವ್ಯಕ್ತಪಡಿಸಿವೆ. ರಾಷ್ಟ್ರೀಯ ಹೆದ್ದಾರಿಗಳು, ಪ್ರವಾಸೋದ್ಯಮ ಮತ್ತು ಮಾನವನ ಆಕ್ರಮಣದಿಂದಾಗಿ ಹುಲಿಗಳು ಒಂದು ಅರಣ್ಯದಿಂದ ಇನ್ನೊಂದಕ್ಕೆ ಚಲಿಸುವ ನೈಸರ್ಗಿಕ ಸಂಚಾರ ಮಾರ್ಗಗಳು ಮುಚ್ಚಿಹೋಗಿವೆ, ಗಡಿ ಪ್ರದೇಶದ ಒತ್ಡದಿಂದ ಹುಲಿಗಳ ಸಂಖ್ಯೆ ಹೆಚ್ಚಳವಾಗಿ ಬಲವಾದ ಹುಲಿಗಳು ಕಾಡಿನ ಕೇಂದ್ರಸ್ಥಾನಗಳನ್ನು ಆಕ್ರಮಿಸಿಕೊಂಡಾಗ ವಯಸ್ಸಾದ, ಗಾಯಗೊಂಡ ಹುಲಿಗಳು ಕಾಡಂಚಿನ ಗ್ರಾಮಗಳಿಗೆ ತಳ್ಳಲ್ಪಟ್ಟು ವನ್ಯಜೀವಿ ಮತ್ತು ಮಾನವನ ಸಂಘರ್ಷ ವಿಕೋಪಕ್ಕೆ ಮುಟ್ಟಿದೆ.
ಕರ್ನಾಟಕವು ಹುಲಿ ಸಂರಕ್ಷಣೆಯಲ್ಲಿ ಮಾದರಿ ರಾಜ್ಯವೆನಿಸಿಕೊಂಡಿದ್ದು 2025 ರಲ್ಲಿ ಒಂದೇ ದಿನ 5 ಹುಲಿಗಳು ಮಲೆಮಹದೇಶ್ವರ ಅರಣ್ಯದ ಗಿರಿಯಬೈಲು ಮತ್ತು ಹನೂರು ವ್ಯಾಪ್ತಿಯಲ್ಲಿ ಕಾರ್ಬೋಪ್ಯೂರನ್ ಎಂಬ ಮಾರಕ ಕೀಟನಾಶಕ ವಿಷಪ್ರಾಶನ ದಿಂದ ಸೇಡಿನ ಕೊಲೆಯಾದದ್ದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ವನ್ಯಜೀವಿ ಮಾಧ್ಯಮಗಳಾದ BBC, Rectess The Hindhu, WWF,IUCN ಇತ್ಯಾದಿಗಳಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿ “ಜಾಗತಿಕವಾಗಿ ಹುಲಿಗಳ ಅಸ್ತಿತ್ವಕ್ಕೆ ಇರುವ ದೊಡ್ಡ ಬೆದರಿಕೆ” ಎಂದು ವರ್ಗೀಕರಿಸಿವೆ. ಇಷ್ಟಲ್ಲದೆ 2010 ರಿಂದಲೂ ಈ ರೀತಿಯ ಸೇಡಿನ ಸಾವುಗಳು ಮತ್ತು ಸಹಜ ಸಾವುಗಳು ಚಾಮರಾಜನಗರದ ಅರಣ್ಯ ವ್ಯಾಪ್ತಿಗಳಲ್ಲಿ ನಡೆದಿರುವುದು ಜಾಗತಿಕ ಮಟ್ಟದ ಆತಂಕಕ್ಕೆ ಕಾರಣವಾಗಿದೆ.
ಈಗಾಗಲೇ ಮಾನವ ಜೀವಿ ಮತ್ತು ವನ್ಯಜೀವಿ ಸಂಘರ್ಷಗಳನ್ನು ನಿಯಂತ್ರಣಗೊಳಿಸಲು ಅರಣ್ಯ ಇಲಾಖೆ ಕಠಿಣ ಕ್ರಮಗಳನ್ನು ಪಾಲಿಸಿದೆ ಅದಾಗ್ಯೂ, ಕೂಡಾ ತ್ವರಿತಗತಿ ಪರಿಹಾರವನ್ನು ಹುಲಿ ದಾಳಿಯಿಂದ ತುತ್ತಾದ ಕುಟುಂಬಕ್ಕೆ ನೀಡಿವುದು, ಆಧುನಿಕ ತಂತ್ರಜ್ಞಾನದ ಬಳಕೆ, ಆರ್,ಆರ್,ಟಿ ಪಡೆ ಹೆಚ್ಚಿಸುವುದು, ರೈಲ್ವೇಬ್ಯಾರಿಕೇಡ್ ಸೋಲಾರ್ ಫೆನ್ಸಿಂಗ್, ಕ್ಯಾಮಾರ ಮ್ಯಾಪಿಂಗ್, ಡ್ರೋನ್ ಬಳಕೆ, ರೈತರಿಗೆ ಹಿಮ್ಮುಖ ಮುಖವಾಡ ಬಳಕೆಗೆ ಜಾಗೃತಿ ನೀಡುವುದು, ಪೈಬರ್ ಗ್ಲಾಸ್ ಕುತ್ತಿಗೆ ಪಟ್ಟಿಗಳನ್ನು ಕಾಡಂಚಿನ ರೈತರಿಗೆ ನೀಡುವುದು, ಬಂಗಾಳದ ಮಾದರಿಯ ನೈಲಾನ್ ನೆಟ್ ಫೆನ್ಸಿಂಗ್ ವ್ಯವಸ್ಥೆ ಮಾಡಿ ಹುಲಿಗಳ ಬಗ್ಗೆ ಕಾಡಂಚಿನ ರೈತರಿಗೆ ಸೂಕ್ತ ತಿಳುವಳಿಕೆ ನೀಡಿದರೆ ಹುಲಿಗಳ ಸೇಡಿನ ಕೊಲೆಗಳು ಕಡಿಮೆಯಾಗಿ ಮಾನವ ಜೀವಿ ಮತ್ತು ವನ್ಯಜೀವಿಗಳ ಸಂಘರ್ಷ ಕಡಿಮೆಯಾಗಿ ಸಹಬಾಳ್ವೆ ಮೂಡಬಹುದು.
ಲೇಖಕರು: ಶ್ರೀಧರ್ (ಸಿರಿ), ಸಾಹಿತಿ, ಚಾಮರಾಜನಗರ