ಲಕ್ಕೊ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಎಸ್ಪಿಯ ಏಕೈಕ ಶಾಸಕರಾಗಿದ್ದ ಉಮಾಶಂಕರ್ ಸಿಂಗ್ ಬುಧವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 55 ವರ್ಷ ವಯಸ್ಸಾಗಿತ್ತು.
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ರಾಸ್ರಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಉಮಾಶಂಕರ್ ಸಿಂಗ್, ಬ್ರೌನ್ ಟ್ಯೂಮರ್ ನಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಉಮಾಶಂಕರ್ ಸಿಂಗ್ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಬಿಎಸ್ಪಿ ವರಿಷ್ಠೆ ಮಾಯಾವತಿ, “ಉಮಾಶಂಕರ್ ಸಿಂಗ್ ಅವರ ನಿಧನದಿಂದ ನಾನು ದುಃಖಿತಳಾಗಿದ್ದೇನೆ. ಅವರ ಕುಟುಂಬಸ್ಥರು ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು” ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಾಯಾವತಿ ಅವರು, “ಉಮಾಶಂಕರ್ ಸಿಂಗ್ ಬದ್ಧತೆ, ಪ್ರಾಮಾಣಿಕತೆ ಹಾಗೂ ಪಕ್ಷಕ್ಕೆ ಸಂಪೂರ್ಣವಾಗಿ ನಿಷ್ಠರಾಗಿದ್ದ ನಾಯಕರಾಗಿದ್ದರು” ಎಂದು ಶ್ಲಾಘಿಸಿದ್ದಾರೆ.
ಉಮಾಶಂಕರ್ ಸಿಂಗ್ ಅವರ ನಿಧನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಕೂಡ ಸಂತಾಪವನ್ನು ಸೂಚಿಸಿದ್ದಾರೆ.