ಹನೂರಿನಲ್ಲಿ 22 ಕೂಲಿ ಕಾರ್ಮಿಕರ ಅಕ್ರಮ ಬಂಧನ

ಮಣಿಕಂಠ ಜನತಾ ರಾಯಭಾರಿ
1 Min Read

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದ ಗುಡ್ಡದ ತಪ್ಪಲಿನಲ್ಲಿ ನಡೆದಿರುವ ಅತ್ಯಂತ ಅಮಾನವೀಯ ಕೃತ್ಯವೊಂದು ತಡವಾಗಿ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?: ತಮಿಳುನಾಡು, ಬಿಹಾರ ಮತ್ತು ಆಂಧ್ರಪ್ರದೇಶ ಮೂಲದ ಸುಮಾರು 22 ಬಡ, ಅನಾಥ ಮತ್ತು ಅಂಗವಿಕಲ ಕಾರ್ಮಿಕರನ್ನು ಕಳೆದ ಒಂದು ವರ್ಷದಿಂದ ಅಕ್ರಮವಾಗಿ ಬಂಧನದಲ್ಲಿಟ್ಟು, ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.

ರೈಲ್ವೆ ನಿಲ್ದಾಣದಿಂದ ಕರೆತಂದು ವಂಚನೆ: ಆರೋಪಿ ಷಣ್ಮುಗಂ ಮೇಸ್ತ್ರಿ ಎಂಬಾತ ತಮಿಳುನಾಡಿನ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ನಿರ್ಗತಿಕರು, ಕೈ-ಕಾಲು ಊನವಿರುವ ಅಂಗವಿಕಲರು ಮತ್ತು ಅನಾಥರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಹನೂರಿಗೆ ಕರೆತಂದಿದ್ದಾನೆ ಎಂದು ತಿಳಿದುಬಂದಿದೆ.

ಊಟ, ನೀರಿಲ್ಲದೆ ಚಿತ್ರಹಿಂಸೆ: ಕಳೆದ ಒಂದು ವರ್ಷದಿಂದ ಈ 22 ಜನರಿಗೆ ಯಾವುದೇ ಕೂಲಿ ನೀಡದೆ, ಸರಿಯಾಗಿ ಊಟ, ನೀರು ಸಹ ನೀಡದೆ ಗುಡ್ಡದ ತುದಿಯಲ್ಲಿ ಬಂಧಿಸಿ ಕೆಲಸ ಮಾಡಿಸಲಾಗುತ್ತಿದೆ. ಪ್ರಶ್ನಿಸಿದರೆ ಹಲ್ಲೆ ನಡೆಸಲಾಗುತ್ತಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಸ್ಥಳದಲ್ಲಿ ಸೆರೆಹಿಡಿದಿರುವ ಫೋಟೋದಲ್ಲಿ ಸಂತ್ರಸ್ತರ ದಯನೀಯ ಸ್ಥಿತಿ ಕಂಡುಬಂದಿದೆ.

ಕ್ರಮಕ್ಕೆ ಆಗ್ರಹ: ಈ ಅಮಾನವೀಯ ಕೃತ್ಯದ ಬಗ್ಗೆ ತಿಳಿದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಹನೂರು ತಾಲೂಕು ಆಡಳಿತ, ತಹಸೀಲ್ದಾರ್ ಮತ್ತು ಪೊಲೀಸ್ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ, ಬಂಧನದಲ್ಲಿರುವ 22 ಅಮಾಯಕರನ್ನು ರಕ್ಷಿಸಿ, ಅವರಿಗೆ ಸೂಕ್ತ ಆಹಾರ, ಆಶ್ರಯ ಮತ್ತು ವೈದ್ಯಕೀಯ ನೆರವು ಒದಗಿಸಬೇಕು. ಜೊತೆಗೆ ಮುಖ್ಯ ಆರೋಪಿ ಷಣ್ಮುಗಂ ಮೇಸ್ತ್ರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಅಮ್ಜದ್ ಖಾನ್ ರವರು ಒತ್ತಾಯಿಸಿದ್ದಾರೆ.

Share this Article
Leave a comment